ಕೌನ್‌ ಬನೇಗಾ ಕರೋಡ್‌ಪತಿ: 50 ಲಕ್ಷ ಗೆದ್ದ ಉಡುಪಿಯ ​ ​ ಅನಮಯ  

ಉಡುಪಿ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ, ಬಾಲಿವುಡ್‌ ನಟ ಅಮಿತಾಬ್ ಬಚ್ಚನ್‌ ನಿರೂಪಣೆಯ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಉಡುಪಿಯ ಬಾಲಕ ಅನಮಯ ರೂ.50 ಲಕ್ಷ ಬಹುಮಾನ ಗೆದ್ದಿದ್ದಾನೆ.​ 

ಡಿ.14ರಿಂದ 17ರವರೆಗೆ ಪ್ರಸಾರವಾಗುವ ಕೆಬಿಸಿ ಸ್ಟುಡೆಂಟ್ಸ್ ವೀಕ್‌ ಸರಣಿಯಲ್ಲಿ ಭಾಗವಹಿಸಿದ್ದ ಅನಮಯ, ಅಮಿತಾಬ್ ಕೇಳಿದ 14 ಪ್ರಶ್ನೆಗಳಿಗೆ ಉತ್ತರ ನೀಡಿ ರೂ 50 ಲಕ್ಷ ಗೆದ್ದುಕೊಂಡ. ರೂ 1 ಕೋಟಿ ಬಹುಮಾನದ 15 ನೇ ಪ್ರಶ್ನೆಗೆ ಉತ್ತರಿಸದೆ ಸ್ಪರ್ಧೆಯಿಂದ ಹೊರಬಂದ.
​​
ಸ್ಪರ್ಧೆಯ ನಿಯಮಾವಳಿಯ ಪ್ರಕಾರ 6 ವರ್ಷದ ಬಳಿಕ ಅನಮಯಗೆ ರೂ. 50 ಲಕ್ಷ ಬಹುಮಾನದ ಮೊತ್ತ ಹಾಗೂ ಬಡ್ಡಿಯ ಹಣ ಒಟ್ಟಾಗಿ ಕೈಸೇರಲಿದೆ. ಜತೆಗೆ, ರೂ. 5 ಲಕ್ಷದ ಸ್ಕಾಲರ್ ಶಿಪ್‌ ಕೂಡ ದಕ್ಕಿಸಿಕೊಂಡ.​ ಅನಮಯ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಕೊಂಡಿದ್ದ, ಕಾರ್ಯಕ್ರಮದಲ್ಲಿ ಅಮಿತಾಬ್‌ ಕಾರಿನ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆಲ್ಲ ಪಟಪಟನೆ ಉತ್ತರಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ.

ಜಗತ್ತಿನ ದುಬಾರಿ ಕಾರುಗಳ ಹೆಸರು, ವಿಶೇಷತೆಯ ಕುರಿತು ವಿವರ ನೀಡಿದ ಅನಮಯ, ಮುಂದೆ ಕಾರು ತಯಾರಿಕಾ ಕಂಪನಿ ಆರಂಭಿಸುವ ಇರಾದೆಯನ್ನು ವ್ಯಕ್ತಪಡಿಸಿದ.ಅನಮಯ ಉಡುಪಿಯ ವಿದ್ಯೋದಯ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದು, ಬಹುಮುಖ ಪ್ರತಿಭೆಯ ವಿದ್ಯಾರ್ಥಿಯಾಗಿದ್ದಾನೆ.​​

 
 
 
 
 
 
 
 
 
 
 

Leave a Reply