ಸದಾಶಿವ್ ಸೊರಟೂರು ಕಥಾ ಅಂಕಣ – ಒಂದು ತಿಳಿನೀಲಿ ಪತ್ರದ ಕಥೆ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

27

ಅಂಚೆಯವನು ನನ್ನ ಕಾಂಪೌಂಡಿನೊಳಗೆ ಇಣುಕುತ್ತಿದ್ದದ್ದು ಎರಡು ಕಾರಣಕ್ಕೆ. ಪತ್ರಿಕೆಗಳಿಂದ ಬರುವ ಗೌರವಧನದ ತಲುಪಿಸಲು ಮತ್ತು ಚಂದಾದಾರಿಕೆಯ ಕೆಲವು ಮ್ಯಾಗಜಿನ್ ಗಳನ್ನು ಒಪ್ಪಿಸಲು. ಜೀವವಿಮಾ ಕಂತನ್ನು ನೆನಪಿಸುವ ಚೀಟಿಗಳು ಬರುವುದು ಕೂಡ ನಿಂತುಹೋಗಿದೆ. ಆ ಕೆಲಸವನ್ನು ಎಸ್ಎಂಎಸ್ ಗಳು ಈಗ ಪಾಂಗಿತವಾಗಿ ಮಾಡುತ್ತಿವೆ. ನೋಡಿ, ಕೆಲವೊಮ್ಮೆ ನಮ್ಮ ಬದುಕಿನ ಘಟನೆಗಳು ಸಿನಿಮಾವನ್ನು ಮೀರಿ ನಡೆದುಬಿಡುತ್ತವೆ. ಅಷ್ಟೇ ರಂಜನೀಯ, ಅಷ್ಟೇ ಕುತೂಹಲ ಮತ್ತು ಭಾವನಾತ್ಮಕವಾಗಿಯೂ ಕೂಡ. ಅವತ್ತು ಸೈಕಲ್ ಬೆಲ್ ಬಾರಿಸಿ ಕಾಂಪೌಂಡು ದಾಟಿ ಒಳ ಬಂದವನ ಕೈಯಲ್ಲಿ ಒಂದು ತಿಳಿನೀಲಿ ಬಣ್ಣದ ಇನ್ಲ್ಯಾಂಡ್ ಲೆಟರ್ ಇತ್ತು. ಅವನು ನನ್ನ ಕೈಯಲ್ಲಿ ಪತ್ರ ಇಟ್ಟುಹೋದ. ಆಶ್ಚರ್ಯ ಮತ್ತು ದಿಗಿಲುಗಳು ಒಟ್ಟಿಗೆ ಆದವು. ಇದೇನಿದು ಪತ್ರ? ಬರೀ ಚೆಕ್ಕುಗಳನ್ನು ಹೊತ್ತು ಬರುವ ಕವರ್ ಮತ್ತು ಬಣ್ಣದ ಮ್ಯಾಗಜಿನ್ ನೋಡಿದ್ದ ನನಗೆ ಇಂದು ಪತ್ರ ಬಂದಿರುವುದು ನೋಡಿ ಒಂದು ಸಣ್ಣ ರೋಮಾಂಚನ. ಈ ಕಾಲದಲ್ಲಿ ಪತ್ರ ಬರೆಯುವಂತಹ ಭಂಡ ಮತ್ತು ವ್ಯರ್ಥ ಪ್ರಯತ್ನ ಮಾಡಿದ್ದಾದರೂ ಯಾರು? ಅನ್ನುವ ಒಂದು ಕುತೂಹಲದಿಂದಲೇ ಪತ್ರ ತಿರುಗಿಸಿ ಬರೆದವರ ವಿಳಾಸ ನೋಡಿದೆ. ಹುಡುಗಿಯ ಹೆಸರು, ಚಿಕ್ಕಮಗಳೂರು ಎಂಬ ಊರಿನ ಹೆಸರು, ಅಲ್ಲಿಯ ಬೀದಿಯೊಂದರ ಹೆಸರು ಮತ್ತು ಮನೆ ನಂಬರ್ ಇತ್ತು. ವಿಳಾಸ ಮತ್ತು ಹುಡುಗಿಯ ಹೆಸರು ಯಾಕೋ ಅಷ್ಟಾಗಿ ಪರಿಚಿತವಲ್ಲ ಅನಿಸಿತು. ಇದೆಂಥ ತಲಹರಟೆ? ಒಂದು ಫೋನ್ ಮಾಡಿದರೆ ಆಗ್ತಿತ್ತಲ್ಲ. ಪತ್ರ ಬರೆಯುವಂತಹ ರಿಸ್ಕ್ ಏನು? ಕಥೆಯೊಂದರ ಕರಡು ತಿದ್ದುವ ಬ್ಯುಸಿಯಲ್ಲಿದ್ದ ನನಗೆ ಪತ್ರದ ಬಗ್ಗೆ ಸಾಕಷ್ಟು ಗಮನಕೊಟ್ಟು ಕಥೆಯನ್ನು ಕೆಡಿಸಿಕೊಳ್ಳುವುದು ಬೇಡ ಅನಿಸಿತು. ಪತ್ರವನ್ನು ಪಕ್ಕದಲ್ಲಿಟ್ಟು ಕಥೆಯಲ್ಲಿ ಮುಳುಗಿದೆ. ಪತ್ರದ ಬಗ್ಗೆ ಚಿಮ್ಮುತ್ತಿದ್ದ ವಿಚಿತ್ರ ಕುತೂಹಲವನ್ನು ಮತ್ತಷ್ಟು ಹೊತ್ತು ಜಾರಿಯಲ್ಲಿಡುವ ಪ್ರಯತ್ನ ಮಾಡಿ, ಸುಳ್ಳೇ ಕಥೆಯಲ್ಲಿ ಮುಳುಗಿ ಹೋದಂತೆ ನಟಿಸಿದೆನಾ? ಬಹುಶಃ ಇರಬಹುದೇನೊ!

ಇಂಥಹ ಪತ್ರಗಳು ನಮ್ಮ ಮನೆಯ ಹೊಸ್ತಿಲು ತುಳಿದು ಸುಮಾರು ಇಪ್ಪತ್ತು ವರ್ಷಗಳೆ ಕಳೆದುಹೋದವೆನೊ! ನಾನಾದರೂ ಪತ್ರ ಬರೆದಿದ್ದು ಎಲ್ಲಿ? ಎಂಟನೇ ಕ್ಲಾಸಿನಲ್ಲಿ ಕನ್ನಡ ಮೇಷ್ಟ್ರು ತರಗತಿಯಲ್ಲಿ ತೋರಿಸಿ 50 ಪೈಸೆ ಅಂಚೆ ಕಾರ್ಡಿನಲ್ಲಿ ಬರೆಸಿದ ಪತ್ರವಷ್ಟೆ ಇದುವರೆಗೂ ನನ್ನ ಪಾಲಿಗಿದ್ದದ್ದು. ಹೈಸ್ಕೂಲ್ ದಾಟುವ ಹೊತ್ತಿಗೆ ಮನೆಯ ಮೂಲೆಯಲ್ಲಿ ಫೋನ್ ಬಂದು ಕೂತಿತ್ತು. ಪತ್ರದ ಬಗೆಗಿನ ರುಚಿ, ಕುತೂಹಲ, ಅವು ಕೊಡಬಹುದಾದ ಆನಂದಗಳು ನನಗೆ ಸಿಗಲೇ ಇಲ್ಲ. ಈಗೀಗ ಕಥೆಗಳಲ್ಲಿ ಲೇಖನಗಳಲ್ಲಿ ಬಂದು ಹೋಗುವ ಪತ್ರ ಸಮಾಚಾರದ ಸೊಬಗು ಕಂಡಾಗ ಅಂಥದೊಂದು ಖುಷಿ ನನಗೆ ದಕ್ಕಲಿಲ್ಲವಲ್ಲ ಅನ್ನಿಸುತ್ತಿತ್ತು. ಇರಲಿ, ಮನಸು ಪತ್ರದ ಸುತ್ತಾ ಸುತ್ತುತ್ತಲೇ ಇತ್ತು. ಪಕ್ಕದಲ್ಲಿದ್ದ ಆ ಪತ್ರ ಪದೇಪದೇ ಕಣ್ಣಿಗೆ ಬೀಳುತ್ತಿತ್ತು. ಕೊನೆಗೊಮ್ಮೆ ತಡೆಯಲಾಗದೆ ಪತ್ರವನ್ನು ಒಡೆದೆ. ಇದ್ದದ್ದು ಹತ್ತೇ ಸಾಲುಗಳು. “ಹೇಗಿದ್ದೀರಿ? ನಾನು ಯಾರೆಂದು ನೆನಪಿದೆ ಅಂತ ಭಾವಿಸುತ್ತೇನೆ.

ಬೆಂಗಳೂರಿನಿಂದ ಬಂದಮೇಲೆ ನಿಮ್ಮ ನೆನಪು ಕಾಡಿದೆ. ಈಗಲೂ ಕೂಡ ಆ ದಿನಗಳನ್ನು ನೆನೆದರೆ ಖುಷಿ. ಪತ್ರ ನಿಮಗೆ ಮುಟ್ಟುತ್ತದೊ ಇಲ್ಲವೋ ಗೊತ್ತಿಲ್ಲ. ನಿಮ್ಮ ಹೆಸರಿಗೊಂದು ಪತ್ರ ಬರೆದು ನಾನಂತೂ ನಿರಾಳ. ರಿಜಿಸ್ಟರ್ ಪೋಸ್ಟ್ ಮಾಡಿ ನಿಮ್ಮ ಕೈಗೆ ಮುಟ್ಟಿಸಿ ನಂತರ ನಿಮ್ಮ ಉತ್ತರಕ್ಕೆ ಕಾಯುವ ವಿಚಿತ್ರ ತೊಳಲಾಟ ಬೇಡ ಅಂತ ತೀರಾ ಸಾಮಾನ್ಯ ಅಂಚೆಯಲ್ಲಿ ಕಳುಹಿಸಿದೆ. ನಿಮಗೆ ಮುಟ್ಟಿದರೆ ಸಂತೋಷ, ಮುಟ್ಟದಿದ್ದರೂ ಸಂತೋಷವೇ. ಲೈಫಿನ ಬಗ್ಗೆ ಒಂದು ಕಾಳಜಿ ಇರಲಿ. ಥ್ಯಾಂಕ್ಸ್..” ಅಂತ ಬರೆದು ಕೊನೆಗೆ ತನ್ನ ಹೆಸರಿನ ಪುಟ್ಟ ಸಹಿ ಇಟ್ಟಿದ್ದಳು. ಯಾರಿವಳು ಎಂಬುದು ಥಟ್ಟನೆ ನೆನಪಾಯಿತು. ಬೆಂಗಳೂರಿನ ತರಬೇತಿಯೊಂದರಲ್ಲಿ ಭೇಟಿಯಾದವಳು. ಭೇಟಿ ಪರಿಚಯವಾಗಿ, ಪರಿಚಯವು ಆತ್ಮೀಯತೆಯ ಕಡೆ ಹೊರಳಿತ್ತು. ಹೊರಡುವಾಗ ಅವಳು ವಿಳಾಸ ಕೇಳಿದ್ದಳು. ನಾನು ಫೋನ್ ನಂಬರ್ ಕೊಡಲು ಹೋದೆ. ‘ವಿಳಾಸ ಕೊಡಿ ಸಾಕು’ ಅಂದು ಹೋಗಿದ್ದಳು. ಮೂರು ತಿಂಗಳ ನಂತರ ನನ್ನನ್ನು ಹುಡುಕಿಕೊಂಡು ಪತ್ರ ಬಂದಿದೆ. ಎಪ್ಪತ್ತು ಕೇಜಿಯವನಾದ ನಾನು ನೂರು ಗ್ರಾಂ ತೂಗುವಷ್ಟು ಹಗುರಾದೆ. ಎಳೆ ಮಕ್ಕಳು ಮಗ್ಗಿ ಕಲಿಯುವಂತೆ ಪದೇಪದೇ ಓದಿಕೊಂಡೆ. ಇಂತಹ ಒಂದು ಅಕ್ಕರೆಯ ಪತ್ರಕ್ಕೆ ನಾನು ಪ್ರತ್ಯುತ್ತರ ಬರೆಯದೇ ಹೇಗಿರಲಿ? ಅನಿಸಿತು. ತಕ್ಷಣಕ್ಕೆ ಪತ್ರವೊಂದನ್ನು ಬರೆದುಬಿಡಬೇಕು ಅಂದುಕೊಂಡು ಅಂಚೆ ಕಚೇರಿ ತಲುಪಿದೆ. ಅಂಥದ್ದೆ ಪತ್ರಕ್ಕೆ ಅವರು ಕೇಳಿದ್ದು ಕೇವಲ ಎರಡು ರೂಪಾಯಿ. ‘ಅಯ್ಯೋ ಬರೀ ಎರಡು ರೂಪಾಯಾ!?’ ಬಂದ ಉದ್ಗಾರವನ್ನು ನುಂಗಿಕೊಂಡೆ. ಯಾವ ಕಥೆ ಕವನ ಬರಿಯಲಿಕ್ಕೂ ತೆಗೆದುಕೊಳ್ಳದಷ್ಟು ಏಕಾಂತ ಬಳಸಿ ಏಳೆಂಟು ಸಾಲಿನ ಪತ್ರ ಬರೆದು ನೂರಾಏಳು ಸಲ ಓದಿ ಅಂಚೆ ಡಬ್ಬಕ್ಕೆ ಹಾಕಿ ಬಂದೆ. ಆಮೇಲೆ ತಿಂಗಳುಗಟ್ಟಲೆ ನಾನು ಕಳಿಸಿಕೊಟ್ಟ ಪತ್ರ ನನ್ನಲ್ಲಿ ಹುಟ್ಟು ಹಾಕಿದ ವಿಚಿತ್ರ ತಳಮಳ, ಕುತೂಹಲ, ಖುಷಿಗಳಿವೆಯಲ್ಲಾ ಅವುಗಳನ್ನು ಹೇಗೆ ಬರೆಯಲಿ? ಮೆಸೇಜ್ ಮಾಡಿದ ತಕ್ಷಣ ಮೂರು ಸೆಕೆಂಡಿಗೆ ಬರುವ ಉತ್ತರ ಬದುಕಿನ ಕ್ಷಣಭಂಗುರ ತೋರಿಸಿ ಮೂರು ದಿನಕ್ಕೆ ಸಂಬಂಧವನ್ನು ಸಾಕು ಮಾಡಿದ್ದು ನನ್ನ ಅನುಭವದಲ್ಲಿ ನೂರಿವೆ. ಪತ್ರ ನೆಪದ ಈ ಸಂಬಂಧವೇಕೆ ಇಷ್ಟು ಗಾಢ?

ಎರಡು ತಿಂಗಳಿಗೆ ಪ್ರತಿಕ್ರಿಯೆ ಬಂತು. ವಾರಗಟ್ಟಲೆ ಹೊಸ ಅಂಗಿ ತೊಟ್ಟು ಕೊಂಡವನಂತೆ ಕುಣಿದಾಡಿದೆ. ನಾನೊಂದು ಪತ್ರ, ಅವರೊಂದು ಪತ್ರ ಹೀಗೆ ಸುಮಾರು ಎರಡು ವರ್ಷದಿಂದ ಹೀಗೆ ಸಾಗುತ್ತಲೇ ಇದೆ. ಇನ್ನೂ ‘ನೀವು’ ಬಿಟ್ಟು ‘ನೀನು’ ಅನ್ನುವವರೆಗೂ ನಾವು ಬಂದೇ ಇಲ್ಲ. ಪ್ರತಿ ಪದಗಳು ‘ರೀ.. ರೀ..’ ಪ್ರತ್ಯಯವನ್ನು ಕೇಳುತ್ತವೆ. ನಮ್ಮಗಳ ನಡುವೆ ಅದೆಷ್ಟು ಕುತೂಹಲಗಳು ಮೂಡಿವೆ. ಅವು ದಿನದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ವ್ಹಾವ್ ಬದುಕಿಗೆ ಅದೆಂತಹ ಸೊಬಗು. ಇಬ್ಬರ ಬಳಿಯೂ ದುಬಾರಿ ಮೊಬೈಲ್ ಗಳಿವೆ. ಅನ್ಲಿಮಿಟೆಡ್ ನೆಟ್ ಪ್ಯಾಕ್ಗಳಿವೆ. ಆದರೆ ನಮ್ಮ ನಡುವೆ ಪತ್ರಗಳಿಗೆ ಮಾತ್ರ ಜೀವವಿದೆ. ಕೇವಲ ಎರಡು ರೂಪಾಯಿ ಬೆಲೆ ಬಾಳುವ ಪತ್ರಕ್ಕೆ ಇಷ್ಟೊಂದು ಶಕ್ತಿ ಇದೆಯಾ ದೇವರೇ? ಪತ್ರ ಬರೆದುಕೊಂಡೆ ಬದುಕುತ್ತಿದ್ದ ಪೀಳಿಗೆ ಅದೆಷ್ಟು ಲಕ್ಕಿ?

ಅಂಚೆಯವನು “ಸರ್, ಬರೀ ಬ್ಯಾಂಕ್ ನೋಟೀಸು, ಮದುವೆ, ನಾಮಕರಣದ ಆಹ್ವಾನ ಪತ್ರಿಕೆ ಹಂಚಿ ಹಂಚಿ ಕೆಲಸವೇ ಬೇಜಾರಾಗಿತ್ತು ನನಗೆ. ನಿಮಗೆ ಬರುವ ಖಾಸಗಿ ಪತ್ರದಿಂದ ನನ್ನ ಡ್ಯೂಟಿಗೊಂದು ಕಳೆ ಬಂದಿದೆ” ಅಂತಾನೆ. ಪತ್ರ ಇಟ್ಟುಕೊಂಡ ಬ್ಯಾಗು ಹಗುರ ಅನಿಸಿದಾಗ ಪತ್ರದಲ್ಲಿ ಉಕ್ಕಿ ಹರಿದಿರಬಹುದಾದ ಪ್ರೀತಿ, ಭಾರ ಅನಿಸಿದಾಗ ಅಕ್ಷರಗಳು ಮುಳಗಿ ಎದ್ದಿರಬಹುದಾದ ನೋವಿನ ಅಂದಾಜಾಗುತ್ತದೆ ಸಾರ್ ಅಂತಾನೆ. ನನಗೆ ಮನಸ್ಸು ತುಂಬುತ್ತದೆ. ಬದುಕಿಗೆ ಇಂಥದೊಂದು ಸೊಬಗು ತಂದುಕೊಟ್ಟ ಅವಳಿಗೆ ನಾನೆಷ್ಟು ಥ್ಯಾಂಕ್ಸ್ ಹೇಳಲಿ.

ಮುಂದಿನ ಬಾರಿ ಬರುವ ಪತ್ರದಲ್ಲಿ ಅವಳ ಫೋಟೋ ಇರುತ್ತದೆ. ಕಳುಹಿಸಿ ಅಂತ ಕಳೆದ ಪತ್ರದಲ್ಲಿ ಕೋರಿದ್ದೇನೆ. ಬಹುಶಃ ಅವಳು ಫೋಟೋ ಕಳಿಸುವುದರ ಜೊತೆಗೆ ನನ್ನ ಫೋಟೋವನ್ನು ಕೇಳಬಹುದು. ಒಂದು ಕಥೆಯ ಕಾರಣಕ್ಕೆ ಬಿಟ್ಟುಕೊಂಡ ಗಡ್ಡ ಉದ್ದವಾಗಿದೆ. ಇಂದೇ ಟ್ರಿಮ್ ಮಾಡಿಸಿಕೊಂಡು ಸ್ಟುಡಿಯೋಕ್ಕೆ ಹೋಗಿ ಒಂದು ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆಯಾಗುತ್ತಿದೆ. ಪಾಪ, ನನ್ನ ಮೊಬೈಲ್ನಲ್ಲಿರುವ ಸಾವಿರಗಟ್ಟಲೆ ನನ್ನ ಸೆಲ್ಪಿಗಳು ಅನಾಥವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: