ರಾಜ್ಯ ಸರಕಾರದ ಆದೇಶ ಸ್ವಾಗತಾರ್ಹ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ : ಇತ್ತೀಚೆಗೆ ಪ್ರಚಲಿತವಾಗಿರುವ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿದ್ದಾರೆ.

ಎಲ್ಲ ಸರಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸರಕಾರ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸ್ತ್ರವನ್ನೇ ಖಾಸಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಧರಿಸಬೇಕು ಎಂಬುದನ್ನು ರಾಜ್ಯ ಸರಕಾರ ಆದೇಶದಲ್ಲಿ ತಿಳಿಸಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಆಯಾ ಕಾಲೇಜುಗಳ ಕಾಲೇಜು ಅಭಿವೃದ್ಧಿ ಮಂಡಳಿ ಅಥವಾ ಆಡಳಿತ ಮಂಡಳಿಗಳ ಮೇಲ್ವಿಚಾರಣಾ ಸಮಿತಿಯು ನಿರ್ಧರಿಸುವ ಸಮವಸ್ತ್ರವನ್ನೇ ಧರಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಅನ್ವಯ ಶಾಲಾ ಕಾಲೇಜುಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರದ ನಿಯಮಗಳನ್ನು ಪಾಲಿಸುವಂತೆ ರಾಜ್ಯ ಸರಕಾರದಿಂದ ಸೂಕ್ತ ಆದೇಶ ಹೊರಡಿಸಿ ವಿವಾದಕ್ಕೆ ಇತಿಶ್ರೀ ಹಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply