ವೈದ್ಯರು ಸೇರಿ 7 ಸಿಬ್ಬಂದಿಗಳಿಗೆ ಕೊರೋನ ಪಾಸಿಟಿವ್: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ ಸೀಲ್‌ಡೌನ್

Spread the love

ವೈದ್ಯರು ಸೇರಿ 7 ಸಿಬ್ಬಂದಿಗಳಿಗೆ ಕೊರೋನ ಪಾಸಿಟಿವ್: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ ಸೀಲ್‌ಡೌನ್

ಕಾರ್ಕಳ: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಸೇರಿದಂತೆ ಒಟ್ಟು ಏಳು ಮಂದಿ ಸಿಬ್ಬಂದಿಗಳಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.

ಪಾಸಿಟಿವ್ ಬಂದವರಲ್ಲಿ ಅಲ್ಲಿನ ವೈದ್ಯರೊಬ್ಬರು ಸೇರಿದ್ದಾರೆ. ಅಲ್ಲದೇ ಆಸ್ಪತ್ರೆಯ ಗ್ರೂಪ್ ಡಿ ನೌಕರರು ಹಾಗೂ ಚಾಲಕರಿಗೂ ಸೋಂಕು ತಗಲಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಹೆಬ್ರಿ ತಹಶೀಲ್ದಾರ್ ಮಹೇಶ್ಚಂದ್ರ ನೇತೃತ್ವದಲ್ಲಿ ಪೊಲೀಸರು ಕೇಂದ್ರವನ್ನು ಸೀಲ್ಡೌನ್ ಮಾಡಿ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. 48 ಗಂಟೆಗಳ ಕಾಲ ಕೇಂದ್ರವನ್ನು ಬಂದ್ ಮಾಡಿ, ಎರಡು ಬಾರಿ ಸ್ಯಾನಿಟೈಸ್ ಮಾಡಲಾಗುತ್ತದೆ. ಇಂದು ಒಂದು ಬಾರಿ ಸ್ಯಾನಿಟೈಸ್ ಮಾಡಲಾಗಿದ್ದು, ನಾಳೆ ಇನ್ನೊಂದು ಬಾರಿ ಮಾಡಲಾಗುತ್ತದೆ. ಮೂರನೆ ದಿನ ಕೇಂದ್ರವನ್ನು ಪುನಾರಂಭಿಸಲಾಗುವುದು. ಸದ್ಯ ಈ ಕೇಂದ್ರದ ಬದಲು ಬದಲಿ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಸಿಬ್ಬಂದಿಗಳು ಹೋಮ್ ಕ್ವಾರಂಟೇನ್ನಲ್ಲಿರುವವರ ಮಾದರಿ ಸಂಗ್ರಹಕ್ಕೆ ಮನೆಮನೆಗೆ ತೆರಳಿದ್ದ ವೇಳೆ ಈ ರೋಗ ಬಂದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.


Spread the love