ಹಳಿಯಾಳ:- ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ 76- ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟೂ 217 ಮತಗಟ್ಟೆಗಳನ್ನು ತೆರೆಯಲಾಗಿದೆ. ಕ್ಷೇತ್ರದಲ್ಲಿ ಗಂಡು-87,664, ಹೆಣ್ಣು-85,480 ಇತರೇ 3 ಹೀಗೆ ಒಟ್ಟೂ 1,73,177 ಮತದಾರರಿದ್ದಾರೆಂದು ಸಹಾಯಕ ಚುನಾವಣಾಧಿಕಾರಿ(ಎಆರ್ಓ) ಪುಟ್ಟಸ್ವಾಮಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು 217 ಮತಗಟ್ಟೆಗಳನ್ನು 24 ಸೆಕ್ಟರ್ಗಳನ್ನಾಗಿ ವಿಂಗಡಿಸಿ ಪ್ರತಿ ಸೆಕ್ಟರ್ಗೆ ಒಬ್ಬ ಸೆಕ್ಟರ್ ಅಧಿಕಾರಿಯನ್ನಾಗಿ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು. ದಿ.23 ಮತದಾನದ ದಿನ ಸುಮಾರು 1800 ಸಿಬ್ಬಂದಿಗಳು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆಂದು ಪುಟ್ಟಸ್ವಾಮಿ ಹೇಳಿದರು.
ಹಳಿಯಾಳ ಪಟ್ಟಣದ ಮತಗಟ್ಟೆ ಸಂಖ್ಯೆ 90 ನೇದನ್ನು ಪ್ರತ್ಯೇಕವಾಗಿ ಮಹಿಳೆಯರಿಗಾಗಿ ಮೀಸಲಿರಿಸಿ ಮಹಿಳಾ ಅಧಿಕಾರಿಗಳನ್ನು ನೇಮಿಸಿ ‘ಸಖಿ’ ನಿಲಿ ಮತಗಟ್ಟೆಯನ್ನಾಗಿ, ಅಂಗವಿಕಲರಿಗಾಗಿ ಮತಗಟ್ಟೆ ಸಂಖ್ಯೆ 99ನ್ನು ಎಲ್ಲ ಸೌಲಭ್ಯಗಳನ್ನು ಒದಗಿಸಿ ‘ಪಿ.ಡಬ್ಲ್ಯೂಡಿ’ ಮತಗಟ್ಟೆಯನ್ನಾಗಿ ಹಾಗೂ ಎಲ್ಲ ಮೂಲಭೂತ ಸೌಕರ್ಯಗಳನ್ನೊಳಗೊಂಡ ಜೊಯಿಡಾ ತಾಲೂಕಿನ ಪಿ.ಎಸ್.ನಂ 42 ಮಾದರಿ ಮತಗಟ್ಟೆಯನ್ನಾಗಿ ರಚಿಸಲಾಗಿದ್ದು ಒಂದು ಮತಗಟ್ಟೆಗೆ ಕನಿಷ್ಠ 6 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆಂದರು.
ಭಾನುವಾರ ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾಗಿದ್ದು ಕೇವಲ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಬಹುದು ಅಲ್ಲಿಯೂ 5ಕ್ಕಿಂತ ಅಧಿಕ ಜನರಿರಬಾರದು, ಚುನಾವಣೆ ಮತದಾನ ಹಿನ್ನೆಲೆಯಲ್ಲಿ 48 ಗಂಟೆ ಡ್ರಾಯ್ ಡೇ ಇದ್ದು ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದರು.
ಇನ್ನೂ ಮತಗಟ್ಟೆಯಿಂದ 200 ಮೀ ಒಳಗೆ ವಾಹನ ಪ್ರವೇಶ ನಿಷೇಧವಿದೆ. ಮತಗಟ್ಟೆ ಒಳಗೆ ಮೊಬೈಲ್ ಒಯ್ಯುವುದನ್ನು ಕೂಡ ನಿಷೇಧಿಸಲಾಗಿದೆ. ರಾಜಕೀಯ ಪಕ್ಷಗಳವರು ಮತಗಟ್ಟೆಯ ಸಮೀಪ ಶಾಮಿಯಾನ ಹಾಕುವಂತಿಲ್ಲ ಎಂದು ಸೂಚಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಮತಗಟ್ಟೆಯಲ್ಲಿ ಮತದಾರರಿಗೆ ಕನಿಷ್ಟ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ರ್ಯಾಂಪ, ಇತ್ಯಾದಿ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದ ಅವರು ವಿಶೇಷ ಚೇತನರಿಗೆ ಮತ ಚಲಾವಣೆಗೆ ಆಗಮಿಸಲು ವಾಹನ ಸೌಲಭ್ಯವನ್ನು ಮಾಡಲಾಗಿದ್ದು ಸಿಡಿಪಿಓ ಇಲಾಖೆ ಮುಖಾಂತರ ಇದನ್ನು ನಿರ್ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಹಳಿಯಾಳ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜು(ಹವಗಿ)ಯಲ್ಲಿ ಇ.ವಿ.ಎಂ ಮತಯಂತ್ರಗಳನ್ನು ದಾಸ್ತನು 2 ಕೊಠಡಿಗಳನ್ನು ಭದ್ರತಾ ಕೊಠಡಿಯನ್ನಾಗಿ ಸ್ಥಾಪಿಸಲಾಗಿದೆ. ಇಲ್ಲಿಯೇ ಮತದಾನದ ಮುನ್ನಾ ದಿನ ಮತಗಟ್ಟೆ ಸಿಬ್ಬಂದಿಗಳಿಗೆ ಮತಯಂತ್ರಗಳನ್ನು ನೀಡಲು ಮಸ್ಟರಿಂಗ್ ಮತ್ತು ಮತದಾನದ ನಂತರದಲ್ಲಿ ಮತಯಂತ್ರಗಳನ್ನು ಪಡೆಯಲು ಡಿ.ಮಸ್ಟರಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.
ಸುದ್ದಿಗೊಷ್ಠಿಯಲ್ಲಿ ತಹಶೀಲ್ದಾರ್ ಶಿವಾನಂದ ಉಳ್ಳೆಗಡ್ಡಿ, ದಾಂಡೇಲಿ ತಹಶೀಲ್ದಾರ್ ಚಾಮರಾಜ ಪಾಟೀಲ್, ನೋಡಲ್ ಅಧಿಕಾರಿ ವಿನಾಯಕ ಪಾಲನಕರ, ಜಿಕೆ ರತ್ನಾಕರ ಇದ್ದರು.
Leave a Comment